|| ಶ್ರೀ ಕಾಳೀಯಮರ್ದನ ಕೃಷ್ಣಾಯ ನಮಃ ||
ಶ್ರೀ ಮುಖ್ಯಪ್ರಾಣ ದೇವರು (ವಾಯು ದೇವರು) ದೇವದೇವೋತ್ತಮನಾದ ಶ್ರೀಮನ್ನಾರಾಯಣನ ಅಪ್ಪಣೆಯಿಂದ ತತ್ವವಾದವನ್ನು ಲೋಕದಲ್ಲಿ ಸ್ಥಿರಗೊಳಿಸಿ ಆ ಮೂಲಕ ಸಜ್ಜನರನ್ನು ಉದ್ಧರಿಸುವುದಕ್ಕಾಗಿ ಉಡುಪಿಗೆ ಸಮೀಪದ ಪಾಜಕ ಕ್ಷೇತ್ರದಲ್ಲಿ ನಡಿಲ್ಲಾಯ (ಮಧ್ಯಗೇಹ) ಕುಲದ ನಾರಾಯಣ ಭಟ್ಟ ಹಾಗೂ ವೇದವತಿ ದಂಪತಿಗಳ ಮಗನಾಗಿ ಅವತರಿಸಿ ಚತುರ್ಮುಖ ಬ್ರಹ್ಮನ ಮಾನಸ ಪುತ್ರರಾದ ಸನಕ ಮೊದಲಾದ ಮುನಿಗಳ ಅನಾದಿ ಪರಂಪರೆಯಲ್ಲಿ ಬಂದ ಯತಿಗಳಾದ ಶ್ರೀಮದಚ್ಯುತಪ್ರೇಕ್ಷ ತೀರ್ಥರಿಂದ ಪರಮಹಂಸ ಸನ್ಯಾಸಿ ದೀಕ್ಷೆಯನ್ನು ಹೊಂದಿದರು. ಆ ಕಾಲದಲ್ಲಿ ಪೂರ್ಣಪ್ರಜ್ಞರೆಂಬ ನಾಮಕರಣ ಹೊಂದಿದ ಅವರು ನಂತರ ಗುರುಗಳ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷಿಕ್ತರಾದಾಗ ಶ್ರೀ ಮದಾನಂದತೀರ್ಥರೆಂಬ ಅನ್ವರ್ಥಕ ನಾಮವನ್ನು ಹೊಂದಿದರು. ಮಧ್ವಾಚಾರ್ಯವೆಂಬುವುದು ಇವರಿಗೆ ವೈದಿಕ ಸಾಹಿತ್ಯದಲ್ಲಿ ಬರುವ ಪ್ರಸಿದ್ದವಾದ ನಾಮವಾಗಿದೆ.
ಮಧ್ವಾಚಾರ್ಯರು ಕಲಿಯುಗದಲ್ಲಿ ಸಜ್ಜನರ ಕಾರ್ಯಸಿದ್ಧಿಗೆ ಬರುವ ವಿಘ್ನಗಳನ್ನು ನಿವಾರಿಸುವ ದೃಷ್ಠಿಯಿಂದ ದ್ವಾರಕೆಯಿಂದ ಹಡಗಿನ ಮುಖಾಂತರ ಬಂದಿರುವ ವಿಶ್ವಕರ್ಮ ನಿರ್ಮಿತವಾಗಿರುವ ರುಕ್ಮಿಣಿಯಿಂದ ಪೂಜಿಸಲ್ಪಟ್ಟಿರುವ ಸಾಲಿಗ್ರಾಮ ಶಿಲಾಮಯವಾದ ಕಡೆಗೋಲು ನೇಣುಗಳನ್ನು ಧರಿಸಿರುವ ಬಾಲಕೃಷ್ಣನ ಮೂರ್ತಿಯನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿರುವರು.ಈ ಕೃಷ್ಣನ ಪೂಜೆ, ದರ್ಶನ ಹಾಗೂ ಸೇವಾ ಇವುಗಳು ಸಜ್ಜನರ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತವೆ. ಶ್ರೀಕೃಷ್ಣನ ಪೂಜೆಗೋಸ್ಕರ ಹಾಗೂ ತಾವು ಉದ್ಧರಿಸಿದ ತತ್ವವಾದದ ಪ್ರಚಾರಕ್ಕೋಸ್ಕರವು ತಮ್ಮ ಬಲ ಸನ್ಯಾಸಿ ಶಿಷ್ಯರುಗಳಾದಂತಹ ಶ್ರೀ ವಿಷ್ಣುತೀರ್ಥರು, ಶ್ರೀ ಜನಾರ್ದನತೀರ್ಥರು, ಶ್ರೀ ಅಧೋಕ್ಷಜತೀರ್ಥರು, ಶ್ರೀ ಹೃಷಿಕೇಶತೀರ್ಥರು, ಶ್ರೀ ವಾಮನತೀರ್ಥರು, ಶ್ರೀ ನರಸಿಂಹತೀರ್ಥರು, ಶ್ರೀ ರಾಮತೀರ್ಥರು, ಶ್ರೀ ಉಪೇಂದ್ರತೀರ್ಥರು ಇವರುಗಳನ್ನು ಉಡುಪಿಯಲ್ಲಿ ನೇಮಿಸಿದ್ದು, ಕೃಷ್ಣನ ಪೂಜೆಯ ಅಧಿಕಾರವನ್ನು ಪಡೆದಿರುವ ಈ 8 ನೇ ಪರಂಪರೆಗೆ ಸೇರಿದವರು ಉಡುಪಿಯ ಅಷ್ಟಮಠಗಳೆಂದು ಪ್ರಸಿದ್ಧರಾಗಿದ್ದರು. ಈ ಎಲ್ಲಾ ವಿಷಯಗಳು ಪಂಡಿತರಾದ ನಾರಾಯಣ ಪೆಜತ್ತಾಯರಿಂದ ಅವರ ಸುಮಧ್ವವಿಜಯ, ಪ್ರಮೇಯಮಾಲಿಕಾ ಮೊದಲಾದ ಗ್ರಂಥಗಳಲ್ಲಿ ವರ್ಣಿಸಲ್ಪಟ್ಟಿದೆ. ಆಚಾರ್ಯರ ಸಾಕ್ಷಾತ್ ಶಿಷ್ಯರಾದ ಸೋದೆಮಠದ ಮೂಲ ಯತಿಗಳಾದ ಶ್ರೀವಿಷ್ಣುತೀರ್ಥರು ಸಂಗ್ರಹಿಸಿರುವ ಸನ್ಯಾಸ ಪದ್ಧತಿ ಹಾಗೂ ಪಲಿಮಾರುಮಠದ ಮೂಲ ಯತಿಗಳಾದ ಶ್ರೀಹೃಷಿಕೇಶತೀರ್ಥರಿಂದ ಸಂಗ್ರ ಹೀತವಾದ ಸಂಪ್ರದಾಯ ಪದ್ದತಿ ಮೊದಲಾದ ಗ್ರಂಥಗಳು ಈ ವಿಷಯವನ್ನು ಸ್ಪಷ್ಟಪಡಿಸುತ್ತದೆ.
ಮಧ್ವಾಚಾರ್ಯರಿಂದ ಪ್ರವರ್ತಿಸಲ್ಪಟ್ಟಂತಹ ಶ್ರೀಕೃಷ್ಣನ ಪೂಜಾಧಿಕಾರವುಳ್ಳಂತಹ 8 ಸನ್ಯಾಸಿಗಳ ಪರಂಪರೆಯಲ್ಲಿ ಶ್ರೀ ಜನಾರ್ದನತೀರ್ಥರ ಪರಂಪರೆಯು ಒಂದಾಗಿದ್ದು, ಇದು ಈಗ ಕೃಷ್ಣಾಪುರಮಠ ಪರಂಪರೆ ಎಂದು (ಜನಾರ್ದನ ಪರಂಪರೆ) ಪ್ರಖ್ಯಾತವಾಗಿದೆ. ಶ್ರೀಜನಾರ್ದನತೀರ್ಥರು ಈ ಮಠದ ಮೂಲ ಯತಿಗಳಾಗಿದ್ದು, ನಾರಾಯಣ ಪೆಜತ್ತಾಯರ ಸುಮಧ್ವವಿಯ ಗ್ರಂಥದಲ್ಲಿ”ಜನನಾದ್ಯುಪಮರ್ದಿನ” ಎಂದು ವರ್ಣಿಸಲ್ಪಟ್ಟಿರುವರು. ಅಪರೋಕ್ಷಜ್ಞಾನಿಗಳ ಲಕ್ಪಣವಾಗಿರತಕ್ಕಂತಹ ಹುಟ್ಟು, ಸಂಸಾರ ಮೊದಲಾದ ಕ್ಲೇಶಗಳನ್ನು ನಿಗ್ರಹಿಸಿಕೊಂಡಿರುವವರೆಂದು ಈ ಶಬ್ದದ ಅರ್ಥವಾಗಿರುತ್ತದೆ.
ಅಂದರೆ ಜೀವನ ಮುಕ್ತರಾಗಿದ್ದಾರೆಂದು ಈ ಪದದ ಅರ್ಥವಾಗಿದ್ದು ಗುರುಗಳಾಗಿ ಆಶ್ರಯಿಸಲು ತಕ್ಕ ಯೋಗ್ಯತೆಯುಳ್ಳವರಾಗಿರುತ್ತಾರೆ. ಪರಮಾತ್ಮನ ಪ್ರತ್ಯಕ್ಷ ದರ್ಶನವನ್ನು ಹೊಂದಿರುವ ಇವರ ಚರ್ಯೆಗಳು ಸಜ್ಜನರನ್ನು ಸಂಸಾರದಿಂದ ಉದ್ಧರಿಸಲು, ಸಮರ್ಥವಾಗಿರುತ್ತದೆ. ಈ ಪೀಳಿಗೆಯಲ್ಲಿ 2 ನೇಯವರಾದಂತಹ ಶ್ರೀ ವತ್ಸಂಕತೀರ್ಥರು ಕೋಟೇಶ್ವರದ ಸಮೀಪದ ನೇರಂಬಳ್ಳಿಯಲ್ಲಿ ಪ್ರಥಮವಾಗಿ ಶ್ರೀಕೃಷ್ಣಾಪುರಮಠದ ಶಾಖೆಯನ್ನು ಕಟ್ಟಿಸಿದ್ದು, ಆ ಕಾಲದಲ್ಲಿ ಜನಾರ್ದನತೀರ್ಥರ ಪರಂಪರೆಗೆ ನೇರಂಬಳ್ಳಿಮಠ ಎಂಬ ಹೆಸರು ಇರಬಹುದಾದ ಸಂಭವ ಇರುತ್ತದೆ. ಇವರ ನಂತರ ಈ ಪರಂಪರೆಯಲ್ಲಿ ಬಂದಿರತಕ್ಕಂತಹ ಶ್ರೀ ವಾಗೀಶತೀರ್ಥರು, ಶ್ರೀಲೋಕೇಶತೀರ್ಥರು, ಶ್ರೀ ಲೋಕಾನಾಥತೀರ್ಥರು ಹಾಗೂ ಶ್ರೀ ಲೋಕಪೂಜ್ಯತೀರ್ಥರು, ಶ್ರೀ ವಿದ್ಯಾರಾಜತೀರ್ಥರು ಇವರುಗಳು ವಿದ್ವಾಂಸರು, ತಪಸ್ವಿಗಳು, ಸಿದ್ಧಿ ಉಳ್ಳವರಾಗಿದ್ದು, ಇವರೆಲ್ಲರ ವೃಂದಾವನಗಳು ಶ್ರೀ ಕೃಷ್ಣಾಪುರಮಠಕ್ಕೆ ಸೇರಿದ ನೇರಂಬಳ್ಳಿ ಶಾಖಾ ಮಠದಲ್ಲಿ ಇರುತ್ತದೆ. ಈ ಪರಂಪರೆಯಲ್ಲಿ 8 ನೇಯವರಾಗಿ ಬಂದಿರತಕ್ಕಂತಹ ಶ್ರೀ ವಿಶ್ವಾದೀಶರಾಜ ಜತೀರ್ಥರ ಮೂಲ ವೃಂದಾವನ ಉಡುಪಿ ಶ್ರೀಕೃಷ್ಣಮಠದ ವೃಂದಾವನ ಸಮುಚ್ಛಯದಲ್ಲಿದೆ. ನಂತರ ಶ್ರೀ ವಿಶ್ವಾಧೀಶತೀರ್ಥರು, ಶ್ರೀ ವಿಶ್ವೇಶತೀರ್ಥರು, ಶ್ರೀವಿಶ್ವವಂದ್ಯತೀರ್ಥರು, ಶ್ರೀ ವಿಶ್ವರಾಜತೀರ್ಥರು, ಶ್ರೀ ಧರಣಿಧರತೀರ್ಥರು, ಶ್ರೀ ಧರಾಧರತೀರ್ಥರು, ಶ್ರೀ ಪ್ರಜ್ಞಾನಮೂರ್ತಿತೀರ್ಥರು, ಶ್ರೀ ತಪೋಮೂರ್ತಿತೀರ್ಥರು, ಶ್ರೀ ಸುರೇಶ್ವರತೀರ್ಥರು, ಈ ಸಂಸ್ಥಾನದಲ್ಲಿ ಪಟ್ಟಾಭಿಷಿಕ್ತರಾಗಿದ್ದು, ಈ ಪೈಕಿ ಶ್ರೀ ತಪೋಮೂರ್ತಿತೀರ್ಥರಿಗೆ ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ವಿಷ್ಣುತೀರ್ಥರ ಪರಂಪರೆಯಲ್ಲಿ ಬಂದಿರತಕ್ಕಂಥಹ ಪ್ರಖ್ಯಾತರಾದ ಭಾವೀ ಸಮೀರರೆನಿಸಿದ ಶ್ರೀವಾದಿರಾಜತೀರ್ಥರು ಉಡುಪಿಯ ಬೇರೆ ಅಷ್ಟಮಠಗಳಿಗೆ ನೀಡಿದಂತೆ ಹಯಗ್ರೀವ ಪ್ರತಿಮೆಯನ್ನು ನೀಡಿರುತ್ತಾರೆ ಹಾಗೂ ಈಗಲೂ ಉಡುಪಿಯ ಶ್ರೀಕೃಷ್ಣಾಪುರಮಠದಲ್ಲಿ ಚಿಕ್ಕಪಟ್ಟದ ದೇವರಾಗಿ ಈ ಪ್ರತಿಮೆ ಅರ್ಚನೆಗೊಳ್ಳುತ್ತಿದೆ.
ಈ ಪರಂಪರೆಯ 17ನೇ ಯತಿಗಳಾದ ಶ್ರೀ ಸುರೇಶ್ವರತೀರ್ಥರು ಅನಂತರ ಶ್ರೀ ಜಗನ್ನಾಥತೀರ್ಥರು, ಶ್ರೀ ಸುರೇಶತೀರ್ಥರು, ಶ್ರೀ ವಿಶ್ವಪುಂಗವತೀರ್ಥರು, ಶ್ರೀ ವಿಶ್ವವಲ್ಲಭತೀರ್ಥರು, ಶ್ರೀ ವಿಶ್ವಭೂಷಣತೀರ್ಥರು, ಶ್ರೀ ಯಾದವೇಂದ್ರತೀರ್ಥರು , ಶ್ರೀ ಪ್ರಜ್ಞಾನಮೂರ್ತಿತೀರ್ಥರು (ಎರಡನೆಯವರು), ಶ್ರೀ ವಿದ್ಯಾಧಿರಾಜತೀರ್ಥರು ಈ ಸಂಸ್ಥಾನವನ್ನು ಅಲಂಕರಿಸಿರುತ್ತಾರೆ. ಈ ಪೈಕಿ 23ನೇಯವರಾದಂತಹ ಶ್ರೀ ಯಾದವೇಂದ್ರತೀರ್ಥರು ಮಂಗಳೂರು ಜಿಲ್ಲೆ, ಮಂಗಳೂರು ತಾಲೂಕು ಕೆಂಜಾರು ಗ್ರಾಮದ ಬೈಲು ಪೇಜಾವರ ಎಂಬಲ್ಲಿ ಶ್ರೀ ಜನಾರ್ದನ ಪರಂಪರೆಯ ಶಾಖಾ ಮಠವೊಂದನ್ನು ಸ್ಥಾಪಿಸಿರುತ್ತಾರೆ. 26ನೇಯವರಾದ ಶ್ರೀ ವಿದ್ಯಾಮೂರ್ತಿತೀರ್ಥರು¸ ಸುರತ್ಕಲ್ ಗ್ರಾಮದ ಕೃಷ್ಣಾಪುರ ಎಂಬಲ್ಲಿ ಮಠದ ಶಾಖೆಯನ್ನು ಕಟ್ಟಿಸಿದ್ದು, ಅಲ್ಲಿ ತಮಗೆ ದೊರೆತಂತ ಸೀತಾ ಲಕ್ಮಣ ಸಮೇತರಾದಂತಹ ಶ್ರೀ ರಾಮಚಂದ್ರ ದೇವರನ್ನು ಇರಿಸಿರುತ್ತಾರೆ.
ಹಾಗೆಯೇ ಜೈನರಿಂದ ಬಂದಿರತಕ್ಕಂಹ ಶ್ರೀ ಪ್ರಾಣದೇವರನ್ನು ಮಠದಲ್ಲಿ ಪ್ರತಿಷ್ಠಾಪಿಸಿರುತ್ತಾರೆ. ಇವರ ಮೂಲ ವೃಂದಾವನ ಬೈಲು ಪೇಜಾವರ ಮಠದ ಶಾಖೆಯಲ್ಲಿರುತ್ತದೆ. 27ನೇ ಶ್ರೀವಿದ್ಯಾವಲ್ಲಭತೀರ್ಥರ ಮೂಲ ವೃಂದಾವನವು ಬೈಲು ಪೇಜಾವರ ಮಠದ ಶಾಖೆಯಲ್ಲಿರುತ್ತ ದೆ 28 ನೇ ಯತಿಗಳಾದ ಶ್ರೀ ವಿದ್ಯೇನ್ದ್ರ ತೀರ್ಥರು ಲೋಕವಿರಕ್ತರಾಗಿ ಪ್ರಯಾಗ ಕ್ಷೇತ್ರದಲ್ಲಿ ಗಂಗಾ ಪ್ರವಾಹದಲ್ಲಿ ನಿಂತು ಗಂಗೆಯನ್ನು ಪ್ರಾರ್ಥಿಸಿ ತನ್ನನ್ನು ಸ್ವೀಕರಿಸುವಂತೆ ಭಕ್ತಿಯೆಂದ ಪ್ರಾರ್ಥನೆ ಮಾಡಿದಾಗ ಉಂಟಾದ ಜಲಪ್ರವಾಹದಲ್ಲಿ ಮುಳುಗಿ ಪರಂಧಾಮವನ್ನು ಹೊಂದಿರುತ್ತಾರೆ. ಇವರು ಪ್ರಾರ್ಥಿಸಿದ ಗಂಗಾಸ್ತುತಿ ಗಂಗಾ ಪಂಚಕ ಸ್ತುತಿ ಎಂದು ಪ್ರಸಿದ್ಧವಾಗಿದ್ದು ಶ್ರೀ ಕೃಷ್ಣಾಪುರ ಮಠದ ಗುರುಪರಂಪರಾ ಪುಸ್ತಕದಲ್ಲಿ ಪ್ರಕಟವಾಗಿರುತ್ತದೆ. ನಂತರ 29 ನೇ ಯವರಾದಂತಹ ಶ್ರೀ ವಿದ್ಯಾನಿಧಿತೀರ್ಥರ ಹಾಗೂ ೩೦ನೇಯವರಾದಂತಹ ಶ್ರೀವಿದ್ಯಾಸಮುದ್ರ ತೀರ್ಥರ ಮೂಲ ವೃಂದಾವನಗಳು ಸುರತ್ಕಲ್ ಗ್ರಾಮದಲ್ಲಿರುವ ಶ್ರೀ ಕೃಷ್ಣಾಪುರ ಮಠದ ಶಾಖೆಯಲ್ಲಿರುತ್ತದೆ. 30ನೇಯವರಾದಂತಹ ಶ್ರೀ ವಿದ್ಯಾಸಮುದ್ರತೀರ್ಥರು ಶ್ರೀ ವಿದ್ಯಾಪತಿತೀರ್ಥರೆಂಬ ಶಿಷ್ಯರನ್ನು ಸ್ವೀಕರಿಸಿದ್ದು, ಇವರು ಪ್ರಯಾಗ ಸಂಸ್ಥಾನದಲ್ಲಿ ಉಡುಪಿ ಶ್ರೀಕೃಷ್ಣಾಪುರಮಠದ ಶಾಖಾ ಮಠವನ್ನು ಕಟ್ಟಿಸಿದ್ದರು. ಹಾಗೆಯೇ ಉಡುಪಿ ಸಮೀಪ ಪಾಡಿಗಾರು ಎಂಬಲ್ಲಿ ಕ್ಷೇತ್ರ ಹಾಗು ಭೂಮಿಗಳನ್ನು ಕ್ರಯಕ್ಕೆ ಪಡೆದುಕೊಂಡು ಅಲ್ಲಿ ಪಾಡಿಗಾರು ಶಾಖಾ ಮಠವನ್ನು ಕಟ್ಟಿಸಿರುತ್ತಾರೆ. ಇವರು ಚಿಕ್ಕಪಟ್ಟದಲ್ಲಿರುವಾಗಲೇ, ಗುರುಗಳು ಇರುವಾಗಲೇ ಕಾಲವಾಗಿದ್ದು, ಇವರ ವೃಂದಾವನವೂ ಕೂಡಾ ಉಡುಪಿ ಶ್ರೀಕೃಷ್ಣ ಮಠದ ವೃಂದಾವನ ಸಮುಚ್ಛಯದಲ್ಲಿರುತ್ತದೆ.
ಈ ಪರಂಪರೆಯ 31ನೇ ಯತಿಗಳಾದ ಶ್ರೀ ವಿದ್ಯಾಧೀಶತೀರ್ಥರು ಬಹಳ ದೊಡ್ಡ ಪಂಡಿತರಾಗಿದ್ದು, ೪ ಬಾರಿ ಶ್ರೀಕೃಷ್ಣನ ಪೂಜಾ ಪರ್ಯಾಯವನ್ನು, 12 ಬಾರಿ ಶ್ರೀಮನ್ನ್ಯಾಯ ಸುಧಾಮಂಗಳವನ್ನೂ ನೆರವೇರಿಸಿರುತ್ತಾರೆ. ಇವರು ಕಾಶಿಯಲ್ಲಿ 12 ವರುಷಗಳ ಕಾಲ ತರ್ಕ ವಿದ್ಯಾಭ್ಯಾಸವನ್ನು ಮಾಡಿದ್ದರು. ಶ್ರೀ ವಿದ್ಯಾಪತಿತೀರ್ಥರು ಕಟ್ಟಿಸಿದ ಪ್ರಯಾಗ ಮಠದಲ್ಲಿ ಹಾಗೂ ಶ್ರೀಕೃಷ್ಣಾಪುರ ಮಠದ ಆಡಳಿತೆಗೆ ಸೇರಿದ ಮಧ್ವಾಚಾರ್ಯರ ಪೂರ್ವಾಶ್ರಮದ ಗುರುಗಳಾಗಿದ್ದ ಕಂಗಿಲ್ಲಾಯರ ಮನೆ ಎನಿಸಿದ ದಂಡತೀರ್ಥ ಮಠದಲ್ಲಿ ಶ್ರೀಪ್ರಾಣದೇವರ ಪ್ರತಿಷ್ಠೆಯನ್ನು ಮಾಡಿರುತ್ತಾರೆ. ಪ್ರಾಯಾಣಿಕರಿಗೆ, ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಸುರತ್ಕಲ್ ಗ್ರಾಮದ ಶ್ರೀಕೃಷ್ಣಾಪುರ ಮಠದಲ್ಲಿ ಹಾಗೂ ದಂಡತೀರ್ಥ ಮಠದಲ್ಲಿಯೂ ಕೂಡಾ ಅನ್ನಛತ್ರಗಳನ್ನು ನಡೆಸಿಕೊಂಡಿದ್ದರು. ಕೃಷ್ಣಾಪುರದಲ್ಲಿ ಬೈರಾಗಿ ಛತ್ರವನ್ನೂ ಕೂಡಾ ನಡೆಸುತ್ತಿದ್ದರು. ಉಡುಪಿ ಹಾಗೂ ಕೃಷ್ಣಾಪುರದ ಮಠಗಳ ಜೀರ್ಣೋದ್ಧಾರ ಇವರ ಕಾಲದಲ್ಲಿ ಆಗಿದ್ದಿತ್ತು. ಪೇಜಾವರ ಮಠದ ಶ್ರೀ ವಿಶ್ವರಾಜತೀರ್ಥರು, ಶೀರೂರುಮಠದ ಶ್ರೀ ಲಕ್ಷ್ಮೀವಲ್ಲಭತೀರ್ಥರು, ಸೋದೆಮಠದ ಶ್ರೀ ವಿಶ್ವಾಧೀಶತೀರ್ಥರು ಇವರುಗಳು ಶ್ರೀ ವಿದ್ಯಾಧೀಶತೀರ್ಥರ ವಿದ್ಯಾಶಿಷ್ಯರಾಗಿದ್ದರು. ಶ್ರೀ ಪುತ್ತಿಗೆ ಮಠದ ಪ್ರಸಿದ್ಧ ಯತಿಗಳಾದ ಶತಾಯುಷಿ ಶ್ರೀ ಸುಧೀಂದ್ರತೀರ್ಥರಿಗೂ ಶ್ರೀ ವಿದ್ಯಾಧೀಶರು ಆಶ್ರಮವನ್ನು ನೀಡಿದ್ದರು. ಜಮಖಂಡಿ ವಾದಿರಾಜ ಆಚಾರ್ಯ ಮೊದಲಾದವರು ಶ್ರೀ ವಿದ್ಯಾಧೀಶತೀರ್ಥರ ಗೃಹಸ್ಥ ವಿದ್ಯಾ ಶಿಷ್ಯರುಗಳಾಗಿರುತ್ತಾರೆ. ಶ್ರೀ ವಿದ್ಯಾಧೀಶತೀರ್ಥರ ಮೂಲ ವೃಂದಾವನವು ಬೆಂಗಳೂರು ಸಿಟಿ ಮಾರ್ಕೆಟಿನ ಆವರಣದಲ್ಲಿ ಇದ್ದು, ತದನಂತರ ಪೇಜಾವರಮಠದ ಶ್ರೀ ವಿಶ್ವೇಶತೀರ್ಥರು ಇಲ್ಲಿ ಶ್ರೀಕೃಷ್ಣದೇವರನ್ನು ಪ್ರತಿಷ್ಠಾಪಿಸಿ, ಶ್ರೀಕೃಷ್ಣಮಂದಿರವನ್ನು ನಿರ್ಮಿಸಿರುತ್ತಾರೆ.
ಈ ಪರಂಪರೆಯ 32ನೇಯವರಾದ ಶ್ರೀ ವಿದ್ಯಾಪೂರ್ಣತೀರ್ಥರು ಪುತ್ತಿಗೆಮಠದ ಶ್ರೀ ಸುಧೀಂದ್ರತೀರ್ಥರಿಂದ ಆಶ್ರಮ ಸ್ವೀಕರಿಸಿದ್ದು 3 ಪರ್ಯಾಯಗಳನ್ನು ನಡೆಸಿರುತ್ತಾರೆ. ಶ್ರೀಕೃಷ್ಣ ಮಠದ ಚಂದ್ರ ಶಾಲೆ, ಸೂರ್ಯಶಾಲೆಗಳನ್ನು ಹಾಗೂ ಅದಮಾರುಮಠದ ಶ್ರೀವಿಭುದಪ್ರಿಯತೀರ್ಥರು ಅರ್ಧ ನಿರ್ಮಿಸಿದ್ದ ಶ್ರೀಕೃಷ್ಣ ಮಠದ ಚೌಕಿಯ ಕಟ್ಟಡವನ್ನು ಇವರು ಪೂರ್ಣಗೊಳಿಸಿರುತ್ತಾರೆ. ಶ್ರೀಕೃಷ್ಣ ದೇವರ ಗರ್ಭ ಗುಡಿಯ ಮೇಲ್ಭಾಗದಲ್ಲಿರುವ ದಶಾವತಾರ ಪ್ರತಿಮೆಗಳನ್ನು ಇವರೇ ಮಾಡಿಸಿರುತ್ತಾರೆ. ಪಾಡಿಗಾರಿನ ಶ್ರೀವಿಷ್ಣುಮೂರ್ತಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿರುತ್ತಾರೆ. ಶ್ರೀಕೃಷ್ಣದೇವರಿಗೆ ಜನರ ಸಹಕಾರದಿಂದ ಸುವರ್ಣಪಾಲಿಕೆ ಮಾಡಿಸಿ ಸಮರ್ಪಿಸಿರುತ್ತಾರೆ. ಇವರ ಮೂಲ ವೃಂದಾವನವು ಕೂಡಾ ಉಡುಪಿ ಶ್ರೀಕೃಷ್ಣ ಮಠದ ವೃಂದಾವನ ಸಮುಚ್ಛಯದಲ್ಲಿ ಇರುತ್ತದೆ. ಈ ಪರಂಪರೆಯಲ್ಲಿ 33 ನೇಯವರಾದ ಶ್ರೀ ವಿದ್ಯಾರತ್ನತೀರ್ಥರು ಪುತ್ತಿಗೆ ಮಠದ ಶತಾಯುಷಿ ಶ್ರೀ ಸುಧೀಂದ್ರತೀರ್ಥರಿಂದ ಸನ್ಯಸರಾಗಿರುತ್ತಾರೆ. ಇವರು 3 ಬಾರಿ ಶ್ರೀಕೃಷ್ಣಪೂಜಾ ಪರ್ಯಾಯಗಳನ್ನು ನಡೆಸಿದ್ದು, ಪ್ರಕಾಶಿನೀ ಎಂಬ ಕನ್ನಡ ಮಾಸ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಶಿವಳ್ಳಿ ಗ್ರಾಮದ ಪೆರಂಪಳ್ಳಿಯ ರಾಮಕಟ್ಟೆ ಎಂಬಲ್ಲಿ ಶ್ರೀಕೃಷ್ಣಾಪುರ ಮಠದ ಶಾಖಾ ಮಠವನ್ನು ಇವರು ಕಟ್ಟಿಸಿದ್ದು, ಇವರ ಮೂಲ ವೃಂದಾವನವು ಅಲ್ಲಿಯೇ ಇರುತ್ತದೆ.
ಶ್ರೀಕೃಷ್ಣ ಸಭಾ ಮಂದಿರ: ತಮ್ಮ ಉಡುಪಿಯ ಮಠದಲ್ಲಿ ಪ್ರವಚನ ನಾಟಕ ಮೊದಲಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಶ್ರೀಕೃಷ್ಣ ಸಭಾ ಮಂದಿರ ಎಂಬ ಸಭಾಭವನವನ್ನು ಕಟ್ಟಿಸಿದ್ದು, ಈಗ ಇಲ್ಲಿ ಮಠದ ಶಿಷ್ಯರುಗಳ, ಅಭಿಮಾನಿಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ.
1971 ರಿಂದ ಶ್ರೀ ವಿದ್ಯಾಸಾಗರ ತೀರ್ಥರು ಶ್ರೀ ಕ್ರಷ್ಣಾಪುರ ಮಠದ ಪೀಠಾಧಿಪತಿಗಳಾಗಿದ್ದಾರೆ. ಜನವರಿ 18, 2022 ರಂದು ಈ ಬಾರಿ ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರು ಕಾಪು ಬಳಿಯ ದಂಡ ತೀರ್ಥದಲ್ಲಿ ಪುಣ್ಯಸ್ನಾನ ಮಾಡಿ ನಂತರ ಜೋಡುಕಟ್ಟೆಗೆ ಆಗಮಿಸಿ ಶ್ರೀಕೃಷ್ಣ ಪೂಜಾ ಹಕ್ಕುಗಳನ್ನು ವಹಿಸಿಕೊಳ್ಳುತ್ತಿದ್ದಾರೆ. ನಂತರ ಪರ್ಯಾಯ ಸ್ವಾಮೀಜಿಯನ್ನು ಇತರ ಸ್ವಾಮೀಜಿಗಳೊಂದಿಗೆ ಪಲ್ಲಕ್ಕಿಯಲ್ಲಿ ಕೂರಿಸುವುದರೊಂದಿಗೆ ಶ್ರೀಕೃಷ್ಣಮಠಕ್ಕೆ ಪರ್ಯಾಯ ಮೆರವಣಿಗೆಯು ಪ್ರಾರಂಭವಾಗುತ್ತದೆ. ಮೆರವಣಿಗೆಯಲ್ಲಿ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ನಂತರ ಶ್ರೀ ಮದ್ವಾಚಾರ್ಯರ ಮುಂದೆ ಪರ್ಯಾಯ ಸ್ವಾಮೀಜಿಯವರಿಗೆ ಅಕ್ಷಯಪಾತ್ರೆ ಮತ್ತು ದೇಗುಲದ ಕೀಲಿಕೈಗಳನ್ನು ಹಸ್ತಾಂತರಿಸಿ ಅಲ್ಲಿಂದ ಹೊರಹೋಗುವ ಸ್ವಾಮೀಜಿಯಿಂದ ಸರ್ವಜ್ಞ ಪೀಠದಲ್ಲಿ ಆಸೀನರಾಗುತ್ತಾರೆ. ಬಳಿಕ ಬಡಗು ಮಾಳಿಗೆ ವಠಾರದಲ್ಲಿ ಅಷ್ಟಮಠದ ಸ್ವಾಮೀಜಿಗಳ ಔಪಚಾರಿಕ ದರ್ಬಾರ್ ನಡೆಯಲಿದೆ. ಉತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ರಾಜಾಂಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮ ಹಾಗೂ ದರ್ಬಾರ್ ನಡೆಯಿತು.