ಕೃಷ್ಣಾಪುರ ಮಠದ ಶ್ರೀ ಕೃಷ್ಣ ಪ್ರತಿಷ್ಠಾನದಡಿಯಲ್ಲಿ , ಉಡುಪಿ ಮೂಡುಪೆರಂಪಳ್ಳಿಯಲ್ಲಿ ಕಾರ್ಯಾಚರಿಸುತ್ತಿರುವ ಉಡುಪಿ ಪ್ರಪ್ರಥಮ ಸ್ಥಾಪಿತ ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಮಹಾ ವಿದ್ಯಾಲಯಕ್ಕೆ ಭಾವೀ ಪರ್ಯಾಯ ಶ್ರೀಗಳಾದ ಕೃಷ್ಣಾಪುರ ಮಠಾಧೀಶ ಶ್ರೀ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಭೇಟಿ ನೀಡಿದ ಸಂದರ್ಭದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಸ್ವಾಮೀಜಿಯವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಸ್ವಾಮೀಜಿ ಅವರಿಂದ ಪಟ್ಟದ ದೇವರ ಪೂಜೆ ನಡೆದ ಬಳಿಕ ಶ್ರೀಗಳ ಪಾದಪೂಜೆಯನ್ನು ನೆರವೇರಿಸಲಾಯಿತು. ಶ್ರೀಗಳ ಈ ಬಾರಿಯ ಪರ್ಯಾಯೋತ್ಸವಕ್ಕಾಗಿ ಹೊರೆಕಾಣಿಕೆ ಅರ್ಪಿಸಲು ಸಂಸ್ಥೆಯ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಸಂಸ್ಥೆಯ ಪ್ರತ್ಯೇಕ ಜಾಗದಲ್ಲಿ ಬೆಳೆಸಿದ ತರಕಾರಿ ತೋಟವನ್ನು ವೀಕ್ಷಿಸಿದ ಸ್ವಾಮೀಜಿ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಸಸ್ಯಾಹಾರದ ಕೊಡುಗೆಯ ಬಗ್ಗೆ ಆಶೀರ್ವಚನವಿತ್ತರು. ಪ್ರಥಮ ಹಂತದಲ್ಲಿ ಶ್ರೀ ಮಠಕ್ಕೆ ಒಪ್ಪಿಸಲು ಬೆಳೆಯಲಾದ ಸೌತೆಕಾಯಿಗಳ ಕಟಾವಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೈತೋಟದ ನಿರ್ಮಾಣಕ್ಕಾಗಿ ಶ್ರಮಿಸಿದ ಸಂಸ್ಥೆಯ ಸಿಬ್ಬಂದಿ ಕೇಶವ ದೇವಾಡಿಗ ಹಾಗೂ ಅವರ ತಂಡವನ್ನು ಹಾರ್ದಿಕವಾಗಿ ಅಭಿನಂಧಿಸಲಾಯಿತು.